ಶುಕ್ರವಾರ, ಮಾರ್ಚ್ 4, 2016

ಮದುವೆ ನಂತರ, ಇಂತಹ ತಪ್ಪನ್ನು ಮಾತ್ರ ಮಾಡಬೇಡಿ!

ಪ್ರತಿಯೊಬ್ಬರ ಜೀವನದಲ್ಲಿ, ಮದುವೆಯೆನ್ನುವುದು ಒಂದು ಪ್ರಮುಖ ಘಟ್ಟ. ಇಲ್ಲಿ ಮದುವೆಯಾಗುವ ಜೋಡಿ ಜೀವನಪರ್ಯಂತ ಒಬ್ಬರಿಗೊಬ್ಬರು ಜೊತೆ ನೀಡಬೇಕಾಗುವುದರಿಂದ ಪ್ರತಿಯೊಬ್ಬರು ತಮ್ಮ ಮನಸ್ಸಿನ ಕನಸಿನ ರಾಜಕುಮಾರ/ರಾಜಕುಮಾರಿಯನ್ನೇ ಬಯಸುತ್ತಾರೆ. ಆದರೆ ಯಾರಿಗೂ ಈ ಎಲ್ಲಾ ಗುಣಗಳಿರುವ ರಾಜಕುಮಾರ ಖಂಡಿತಾ ಸಿಗುವುದಿಲ್ಲ. ಎಲ್ಲಾ ಗುಣಗಳಿರಲೇಬೇಕೆಂದು ಹಠ ಹಿಡಿದು ಕಠಿಣ ತಪಸ್ಸಿನ ಬಳಿಕ ದ್ರೌಪದಿಗೂ ಈ ಗುಣಗಳು ಐವರು ಪತಿಯರಿಂದ ದೊರಕುವಂತಾಯಿತು. ಅಂತಹದ್ದಿರುವಾಗ ಹುಲುಮಾನವರಾದ ನಮಗೆ ಎಲ್ಲಾ ಗುಣಗಳಿರುವ ವ್ಯಕ್ತಿ ಜೀವನಸಂಗಾತಿಯಾಗಿ ದೊರಕುವರೇ? ಖಂಡಿತವಾಗಿಯೂ ಇಲ್ಲ. ಬದಲಿಗೆ ನಮ್ಮ ಸಂಗಾತಿಯ ನೈಜ್ಯ ವ್ಯಕ್ತಿತ್ವವನ್ನು ಒಪ್ಪಿಕೊಂಡು ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಜೀವನ ಸ್ವರ್ಗವಾಗುತ್ತದೆ. ನೀವು ಬಯಸುವ ಈ ಸಂಗತಿಗಳೆಲ್ಲಾ ನೀವು ಮದುವೆಯಾಗುವವರಲ್ಲಿದೆ ಎಂದು ಸುಳ್ಳು ಹೇಳಿ ನಂಬಿಸುವುದೇ 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯಂತೆ ಹಿರಿಯರು ಕಂಡುಕೊಂಡ ಉಪಾಯ. ಆದರೆ ಈ ಸುಳ್ಳುಗಳು ಸುಂದರವಾದರೂ ಸತ್ಯವಲ್ಲ ಎಂಬುದು ಮದುವೆಯ ಬಳಿಕ ಕೆಲವೇ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಗೊತ್ತಾಗುತ್ತದೆ. ಆದರೆ ಈ ಭರದಲ್ಲಿ ನಿಮ್ಮ ಜೀವನದಲ್ಲಿ ಹಿಂದೆ ನಡೆದು ಹೋದ ಅನೇಕ ಕಹಿ ಘಟನೆಗಳು, ನಿಮ್ಮ ಕೈಹಿಡಿದ ಸಂಗಾತಿಯ ಬಳಿ ಮಾತ್ರ ಹೇಳಬೇಡಿ. ಬನ್ನಿ ಅಂತಹ ಸಂಗತಿ ಯಾವುದೆಂಬುದನ್ನು ಮುಂದೆ ಓದಿ...   ಬಾಯ್‌ಫ್ರಂಡ್/ಗರ್ಲ್‌ಫ್ರೆಂಡ್ ಒಂದು ವೇಳೆ, ವಿವಾಹಕ್ಕೂ ಮೊದಲು, ನಿಮ್ಮ ಗೆಳೆಯನ ಬೇರೋರ್ವ ವ್ಯಕ್ತಿಯೊಂದಿಗೆ ನಿಕಟವಾಗಿದ್ದು ಕಾರಣಾಂತರಗಳಿಂದ ದೂರವಾಗಿದ್ದರೂ ಆ ವ್ಯಕ್ತಿಯ ಬಗೆಗಿನ ಕೆಲವು ಉತ್ತಮ ಗುಣಗಳು ನಿಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ. ಇದನ್ನು ನಿವಾರಿಸಲು ಸಾಧ್ಯವಿಲ್ಲ. ಆದರೆ ಆ ನೆನಪುಗಳು ಒಂದು ಸುಂದರ ನೆನಪಾಗಿ ಸದಾ ನಿಮ್ಮ ಮನದಲ್ಲಿಯೇ ಇರುವುದು ಉತ್ತಮ. ಬದಲಿಗೆ ಈ ಗುಣಗಳನ್ನು ನಿಮ್ಮ ಸಂಗಾತಿಯಲ್ಲಿ ಬಯಸಿ ಆ ತರಹ ಇಲ್ಲ ಎಂಬ ಹೋಲಿಕೆಯನ್ನು ಮಾಡುವುದು ಸರ್ವಥಾ ಸಲ್ಲದು.  ಹೀಗೊಬ್ಬರು ಗೆಳೆಯ/ಗೆಳತಿ ಇದ್ದರು, ಈಗ ನಾವು ಗೆಳೆತನದಲ್ಲಿ ಇಲ್ಲ ಎಂಬ ಒಂದು ಮಾಹಿತಿಯನ್ನು ಮಾತ್ರವೇ ನೀಡಿ ಉಳಿದ ಯಾವುದೇ ಪ್ರಸಂಗವನ್ನು ನಿಮ್ಮ ಸಂಗಾತಿಯಲ್ಲಿ ಪ್ರಸ್ತಾಪಿಸಲೇಬೇಡಿ. ಈಗ ನಿಮ್ಮ ಮನವೇನಿದ್ದರೂ ನಿಮ್ಮ ಸಂಗಾತಿಯ ಬಗ್ಗೆಯೇ ಯೋಚಿಸಬೇಕೇ ಹೊರತು ಹಿಂದೆಂದೋ ಆಗಿದ್ದ ಸಂಬಂಧಕ್ಕಲ್ಲ. ಇದು ನಿಮ್ಮ ದಾಂಪತ್ಯವನ್ನು ಸುಖಮಯವಾಗಿಸುತ್ತದೆ. ವಿವಾಹದ ತಕ್ಷಣ ಮಾತ್ರವಲ್ಲ, ಜೀವನಪರ್ಯಂತ ಆ ವ್ಯಕ್ತಿಯ ಬಗ್ಗೆ ಪ್ರಸ್ತಾವನೆ ಮಾಡದೇ ಇರುವುದೇ ಲೇಸು. ಕೊಂಚ ರಿಲ್ಯಾಕ್ಸ್ ಮಾಡಿಕೊಳ್ಳಿ ವಿವಾಹದ ಬಳಿಕ, ತಾನು ಜನಿಸಿ ಬೆಳೆದ ಪರಿಸರವನ್ನು ಬಿಟ್ಟು ಬೇರೆ ಮನೆಗೆ ಹೊಸ ಪರಿಸರಕ್ಕೆ ಹೋಗುವಾಗ ಹೆಣ್ಣು ಕಣ್ಣೀರು ಹಾಕುವುದು ಸಹಜವೇ ಆಗಿರುತ್ತದೆ. ತಂದೆತಾಯಿಯ ವಾತ್ಸಲ್ಯ, ಸಹೋದರ ಸಹೋದರಿಯರ ಪ್ರೀತಿಯಿಂದ ತಾತ್ಕಾಲಿಕ ಬಿಡುಗಡೆಯನ್ನು ಹೊಂದಿ ಹೊಸ ಮನೆಯಲ್ಲಿ ತನ್ನ ಬಾಂಧವ್ಯವನ್ನು ಬೆಸೆಯಲು ವಧು ಸಿದ್ಧಳಾಗುವ ಸಂದರ್ಭದಲ್ಲಿ ಮನದಲ್ಲಿ ಮಡುಗಟ್ಟಿದ್ದ ದುಃಖ ಕಣ್ಣೀರಿನ ರೂಪದಲ್ಲಿ ಹೊರಹೋಗುತ್ತದೆ. ಆದರೆ ಇದೇ ದುಃಖವನ್ನು, ನಿಮ್ಮ ಗಂಡನ ಬಳಿ ಹೇಳಿ ಆತನನ್ನು ಇನ್ನಷ್ಟು ಇಕ್ಕಟಿಗೆ ಸಿಲುಕಿಸಬೇಡಿ. ಸಾಧ್ಯವಾದಷ್ಟು ಗಂಡನೊಂದಿಗೆ, ಮನೆಯವರೊಂದಿಗೆ, ಕಾಲ ಕಳೆಯಲು ಪ್ರಯತ್ನಿಸಿ ಖರ್ಚುವೆಚ್ಚದ ಜಂಜಾಟಕ್ಕೆ ಹೋಗಬೇಡಿ ಮದುವೆ ಜೀವನದಲ್ಲಿ ಒಂದು ಬಾರಿ ಮಾತ್ರ ಆಗುವ ಸಮಾರಂಭ. ಅದಕ್ಕಾಗಿ ನಿಮ್ಮ ಹುಟ್ಟು ಹಬ್ಬಕ್ಕೆ ಖರ್ಚು ಮಾಡಬೇಕಾದ ಹಣಕ್ಕಿಂತ ಸ್ವಲ್ಪ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಖರ್ಚಿನ ಬಗ್ಗೆ ಆಲೋಚಿಸಬೇಡಿ, ಎಷ್ಟಾದರು ಇದು ನಿಮ್ಮ ಮದುವೆ ಅಲ್ಲವೇ...? ಹಾಗಾಗಿ ವಿವಾಹದ ತಕ್ಷಣ ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಯ ಬಳಿ, ಮದುವೆಯ ಖರ್ಚುವೆಚ್ಚಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರಿ. ಇದನ್ನು ನಿಮ್ಮ ಹಿರಿಯರು ನೋಡಿಕೊಳ್ಳಲಿ. ವಿವಾಹದ ಬಳಿಕ ನಿಮ್ಮ ಮಾತುಗಳಲ್ಲಿ ಮುಂದಿನ ಜೀವನ, ಭವಿಷ್ಯದ ಭದ್ರತೆ, ಮನೆ, ಮಧುಚಂದ್ರ, ಮಧುಚಂದ್ರಕ್ಕೆ ಪ್ರಶಸ್ತ ಸ್ಥಳದ ಆಯ್ಕೆ, ವೃತ್ತಿಪರ ಜೀವನಕ್ಕೆ ಜೀವನಸಂಗಾತಿಯಿಂದ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಮೊದಲಾದ ವಿಷಯಗಳು ನಿಮ್ಮ ಮಾತುಗಳಲ್ಲಿರಲಿ. ಹಣದ ವಿಷಯವೇನಿದ್ದರೂ ನಿಮ್ಮ ನಿತ್ಯದ ಖರ್ಚುವೆಚ್ಚಗಳು ಮತ್ತು ಮಧುಚಂದ್ರಕ್ಕೆ ಹೋಗಿಬರುವ ಪ್ರವಾಸಕ್ಕೆ ಸೀಮಿತವಾಗಿರಲಿ. ಪ್ರಥಮ ನೋಟದಲ್ಲಿಯೇ ಪ್ರೀತಿ ಉಂಟಾಗುವುದಿಲ್ಲ ಯಾವುದೇ ಪ್ರೀತಿ ಒಮ್ಮೆಲೇ ಬೆಳೆಯುವುದಿಲ್ಲ. ಪ್ರಥಮ ನೋಟದಲ್ಲಿ ಪರವಶಳಾದೆ ಎನ್ನುವುದು ಕೇವಲ ಆಕರ್ಷಣೆಯಷ್ಟೇ. ಸಂಗಾತಿಯ ನಡುವಿನ ಪ್ರೀತಿಯೂ ಹಾಗೆಯೇ. ಅವರ ಬಗ್ಗೆ ಅರಿಯಲು, ಅವರಲ್ಲಿ ಪ್ರೀತಿ ಬೆಳೆಯಲು ಸಮಯ ಮತ್ತು ಅವಕಾಶ ಅಗತ್ಯ. ಇದಕ್ಕಾಗಿ ಎಂದಿಗೂ ಸಂಗಾತಿಯ ಬಗ್ಗೆ ಹೊಟ್ಟೆಕಿಚ್ಚು ಪಡುವುದಾಗಲೀ, ಅಥವಾ ತನ್ನೊಂದಿಗೇ ಹೆಚ್ಚಿನ ಸಮಯ ಕಳೆಯಬೇಕು ಎಂಬ ಉದ್ಧಟತನವಾಗಲೀ ಕೂಡದು. ಬದಲಿಗೆ ತಮ್ಮ ಸಂಗಾತಿ ಅಭಿರುಚಿಗಳನ್ನು ತಿಳಿದುಕೊಂಡು ಅದಕ್ಕೆ ಸರಿಹೊಂದಿಕೊಂಡು ಹೋಗುವುದೇ ಸುಖ ಸಂಸಾರದ ಗುಟ್ಟು. ಇದೇ ರೀತಿ ಒಳ್ಳೆಯ ಹವ್ಯಾಸಗಳನ್ನು ಮುಂದುವರೆಸಬೇಕು. ಪರಸ್ಪರ ಪ್ರೀತಿಸುವ ಗಂಡ ಹೆಂಡಿರು ಅವರ ಹವ್ಯಾಸಗಳಿಗೂ ಪ್ರೋತ್ಸಾಹ ನೀಡುವ ಮೂಲಕ ಪ್ರೀತಿ ಬೆಳೆಯುತ್ತದೆ ಸಂಗಾತಿಯ ಸ್ನೇಹಿತರ ಬಗ್ಗೆ ಮಾತನಾಡಬೇಡಿ ವಿವಾಹಕ್ಕೆ ನಿಮ್ಮ ಸಂಗಾತಿಯ ಸ್ನೇಹಿತರೂ ಆಗಮಿಸಿರುತ್ತಾರೆ. ಅವರ ಬಗ್ಗೆ ನಿಮ್ಮ ಸಂಗಾತಿ ತಿಳಿದುಕೊಂಡಷ್ಟು ನೀವು ತಿಳಿದಿರುವುದಿಲ್ಲ. ಕೆಲವರು ಈ ಸಂದರ್ಭವನ್ನು ಮೋಜು ಮಸ್ತಿಗಾಗಿಯೂ ಬಳಸಿ ನಿಮಗೆ ಇಷ್ಟವಾಗದ ಕೆಲವು ಜೋಕು ಅಥವಾ ವಿಷಯಗಳನ್ನು ಕೆದಕಬಹುದು. ಈ ಬಗ್ಗೆ ದಿವ್ಯಮೌನ ವಹಿಸುವುದು ಜಾಣರ ಲಕ್ಷಣ. ಬದಲಿಗೆ ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಮಾಡುವ ಯಾವುದೇ ಟೀಕೆ ನಿಮ್ಮ ಸಂಬಂಧಕ್ಕೆ ಹುಳಿ ಹಿಂಡಬಹುದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ