ಮಂಗಳವಾರ, ಆಗಸ್ಟ್ 30, 2011

13ರ ಹರೆಯದಲ್ಲೇ ಲೈಂಗಿಕ ಕ್ರಿಯೆ, ಜೇಬಿನಲ್ಲಿ ಕಾಂಡೋಮ್!

WD
ದೇಶದ ಮೆಟ್ರೋ ನಗರಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದು ತೀರಾ ಆಘಾತ ಮೂಡಿಸುವಂಥದ್ದು. ಶೇ.45ಕ್ಕೂ ಹೆಚ್ಚು ಮಕ್ಕಳು ಮಾದಕ ದ್ರವ್ಯ ಸೇವಿಸುತ್ತಾರೆ ಎಂಬುದನ್ನು ಎತ್ತಿ ತೋರಿಸಿರುವ ಅದು, ತೀರಾ ಆಘಾತ ನೀಡಿರುವ ಅಂಶವೆಂದರೆ, ಶೇ.25ರಷ್ಟು ಮಂದಿ ಬಾಲ್ಯ ಕಾಲದಲ್ಲಿರುವ ಹುಡುಗ-ಹುಡುಗಿಯರು ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರಂತೆ!
ಮೆಟ್ರೋ ಪಟ್ಟಣಗಳಲ್ಲಿ ಪಬ್ಲಿಕ್ ಸ್ಕೂಲ್‌ಗಳಲ್ಲಿ ಓದುತ್ತಿರುವ ಮಕ್ಕಳು ಏನು ಮಾಡುತ್ತಾರೆ ಎಂಬುದು ಉದ್ಯೋಗದಲ್ಲಿರುವ ತಂದೆ ತಾಯಿಗೆ ಹೆಚ್ಚಾಗಿ ಅರಿವು ಇರುವುದಿಲ್ಲ. ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಇತ್ತೀಚೆಗೆ ರ‌್ಯಾಂಕ್ ಬರುವ ಬಗೆಗಿಂತಲೂ, ಹೊಸ ವಿಷಯವೊಂದರಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಅದೆಂದರೆ ಫೇಸ್‌ಬುಕ್‌ನಲ್ಲಿ ಅತೀ ಹೆಚ್ಚು ಬಾಯ್‌ಫ್ರೆಂಡ್‌ಗಳಿರುವುದು ಯಾರಿಗೆ, ಗರ್ಲ್‌ಫ್ರೆಂಡ್ ಇರುವುದು ಯಾರಿಗೆ ಹೆಚ್ಚು ಎಂಬಿತ್ಯಾದಿಗಳ ಕುರಿತಾಗಿಯೇ ಪೈಪೋಟಿ ಏರ್ಪಟ್ಟಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.
ಮೆಟ್ರೋ ನಗರಗಳಲ್ಲಿ ಕಾಮಕ್ರಿಯೆಯಲ್ಲಿ ಹೊಸದೊಂದು ಚಲನೆ ಕಂಡುಬರುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ, ಸರಿಸುಮಾರು 13 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಕೂಡ ರತಿಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರಂತೆ! ಬಾಲಕಿಯರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಗರ್ಭ ನಿರೋಧಕ ಗುಳಿಗೆಗಳ ಕುರಿತು ಮಾಹಿತಿಯಿದ್ದು, ಅವರು ಅದನ್ನು ಸೇವಿಸುತ್ತಾರೆ ಎಂದಿದೆ ಈ ವರದಿ. ಹುಡುಗರಾದರೆ, ಯಾವಾಗ ಅಗತ್ಯ ಬರಬಹುದೋ ಎಂಬ ನಿರೀಕ್ಷೆಯಲ್ಲಿ ತಮ್ಮ ಜೇಬಿನಲ್ಲೇ ಕಾಂಡೋಮ್‌ಗಳನ್ನು ಇಟ್ಟುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೂ ಈ ವರದಿಯಿಂದ ಬಯಲಾಗಿದೆ.
ಸ್ಟಾರ್ ಟಿವಿಯಲ್ಲಿ ಪ್ರಸಾರವಾದ ಈ ಸಮೀಕ್ಷೆಯ ಪ್ರಕಾರ, ಮಹಾನಗರಗಳಲ್ಲಿ ಒಂದು ಕೋಡ್ ವರ್ಡ್ ಭಾರೀ ಚರ್ಚೆಯಲ್ಲಿದೆ. ಅದೆಂದರೆ 'ಎಫ್‌ಡಬ್ಲ್ಯುಬಿ'. ಅದರ ಪೂರ್ಣರೂಪ 'ಫ್ರೆಂಡ್ ವಿದ್ ಬೆನೆಫಿಟ್'. ಹುಡುಗ ಮತ್ತು ಹುಡುಗಿಯರು ದೋಸ್ತಿಗಳಾಗುತ್ತಾರೆ ಮತ್ತು ಅವರಿಂದ ಎಷ್ಟು ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ನೋಡುತ್ತಾರಂತೆ. ಇದರಲ್ಲಿ ಲೈಂಗಿಕ ಕ್ರಿಯೆ, ಉಡುಗೊರೆ ಮತ್ತು ಅಗತ್ಯ ವಸ್ತುಗಳೂ ಒಳಗೊಂಡಿರುತ್ತವೆ.
ದೆಹಲಿಯ ವೈದ್ಯೆ ರೀಮಾ ನೀಮಾ ಅವರು ಈ ಸಮೀಕ್ಷೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಮಹಾ ನಗರಗಳಲ್ಲಿನ ಮಕ್ಕಳು ಅಮಲು ಪದಾರ್ಥದೊಂದಿಗೆ ಸಣ್ಣ ವಯಸ್ಸಿನಲ್ಲೇ ಕಾಮ ಕ್ರಿಯೆ ನಡೆಸುತ್ತಿರುವುದು ತೀರಾ ಚಿಂತೆಗೆ ಕಾರಣವಾಗಿದೆ ಎಂದಿದ್ದಾರೆ. ಯೌವನ ಬರುವುದಕ್ಕಿಂತ ಮೊದಲೇ ಯೌವನ ತೋರ್ಪಡಿಸುವುದು ತೀರಾ ಆಘಾತಕಾರಿ. ಇದಕ್ಕೆಲ್ಲಾ ಪೋಷಕರು, ಶಾಲಾ ಶಿಕ್ಷಕರು ಮತ್ತು ಕಂಪ್ಯೂಟರ್ ಕೂಡ ಜವಾಬ್ದಾರಿ. ಆಯಾ ಸಮಯದಲ್ಲಿ ಆದರೆ ಎಲ್ಲವೂ ಒಳ್ಳೆಯದು. 13 ವರ್ಷದ ವಯಸ್ಸು ಲೈಂಗಿಕ ಕ್ರಿಯೆ ನಡೆಸುವ ವಯಸ್ಸೇ? ವಯಸ್ಸಾಗುತ್ತಿರುವಂತೆಯೇ ಶಾರೀರಿಕ ಬದಲಾವಣೆಗಳೂ ಆಗುತ್ತಿರುತ್ತವೆ. ಇಂತಹಾ ಪರಿಸ್ಥಿತಿಯಲ್ಲಿ ಹುಡುಗಿಯರು ಅತ್ಯಂತ ಹೆಚ್ಚು ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ ಎಂದಿದ್ದಾರೆ ಅವರು.
ಇದರೊಂದಿಗೆ, ಹೆತ್ತವರು ಕೂಡ ತಮ್ಮ ಮಕ್ಕಳ ಮೇಲೆ ನಿಗಾ ಇರಿಸುವುದರೊಂದಿಗೆ, ಅವರ ಗೆಳೆಯರ ಬಳಗದ ಮೇಲೂ ಹದ್ದಿನ ಕಣ್ಣಿಡಬೇಕಾಗುತ್ತದೆ. ಇಷ್ಟು ಮಾತ್ರವೇ ಅಲ್ಲ, ಮಕ್ಕಳ ಕೈಯಲ್ಲಿ ಅಚಾನಕ್ ಆಗಿ ಏನಾದರೂ ಐಷಾರಾಮಿ ಅಥವಾ ವಿಲಾಸದ ವಸ್ತುಗಳೇನಾದರೂ ಕಂಡರೆ ಅದರ ಬಗೆಗೂ ವಿಚಾರಿಸಬೇಕಾಗುತ್ತದೆ. ಎಳೆ ವಯಸ್ಸಿನಲ್ಲಿ ಒಂದಿಷ್ಟು ಜ್ಗಾರತೆ ವಹಿಸಿದರೆ, ಮಕ್ಕಳು ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ