ಭಾನುವಾರ, ಮೇ 19, 2013

10 ವರ್ಷಗಳಿಂದ ಪತ್ನಿಯ ಗುಪ್ತಾಂಗಕ್ಕೆ ಬೀಗ ಜಡಿದಿದ್ದ ಭೂಪ.


ಇಂದೋರ್: ತನ್ನ ಪತ್ನಿಯ ಗುಪ್ತಾಂಗಗಳಿಗೆ ಬೀಗ ಜಡಿದಿದ್ದ 45ರ ಹರೆಯದ ವ್ಯಕ್ತಿಯೋರ್ವನಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದೆ. ಇಂದೋರ್ನ ವಿಶೇಷ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾದ ಎ.ಕೆ.ಸಿಂಗ್ ಅವರು ಪತ್ನಿಯ ಗುಪ್ತಾಂಗಗಳಿಗೆ ಬೀಗವನ್ನು ಜಡಿದಿದ್ದ ಆರೋಪಿ ಸೋಹನ್ಲಾಲ್ ಚೌಹಾಣ್ನನ್ನು ತಪ್ಪಿತಸ್ಥನೆಂದು ಘೋಷಿಸಿದರು. ಸೆಕ್ಷನ್ 326(ಅಪಾರ ನೋವು ಉಂಟುಮಾಡಿರುವುದು) ಮತ್ತು ಸೆಕ್ಷನ್ 498 ಎ (ವಿವಾಹಿತ ಮಹಿಳೆಯ ಮೇಲೆ ಕ್ರೌರ್ಯ ನಡೆಸಿರುವುದು)ಗಳಡಿಯಲ್ಲಿ ಈತನನ್ನು ಅಪರಾಧಿ ಎಂದು ಪರಿಗಣಿಸಲಾಗಿದೆ. ಚೌಹಾಣ್ಗೆ ಹತ್ತು ವರ್ಷಗಳ ಕಠಿಣ ಜೈಲುವಾಸ ಶಿಕ್ಷೆಯಲ್ಲದೆ 1,000 ರೂ.ಗಳ ದಂಡವನ್ನೂ ವಿಧಿಸಿದೆ. ತನ್ನ ಪತ್ನಿ ಅನೈತಿಕ ದೈಹಿಕ ಸಂಬಂಧಗಳಲ್ಲಿ ತೊಡಗಿಕೊಳ್ಳದಂತಿರಲು ಸೋಹನ್ಲಾಲ್ ಚೌಹಾಣ್ ಪತ್ನಿಯ ಗುಪ್ತಾಂಗಗಳಿಗೆ ಬೀಗ ಜಡಿದಿದ್ದನು. ಕಳೆದ ವರ್ಷದ ಜುಲೈನಲ್ಲಿ ಈತನನ್ನು ಇದೇ ಕಾರಣಕ್ಕಾಗಿ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದ ಒಟ್ಟು 14 ಮಂದಿ ಸಾಕ್ಷಿಗಳಲ್ಲಿ ಈ ದಂಪತಿಯ ಮಗ ಮತ್ತು ಮಗಳೂ ಸೇರಿದಂತೆ ಮೂರು ಮಂದಿ ಸಾಕ್ಷಿಗಳು ನ್ಯಾಯಾಲಯದ ಮುಂದೆ ಪ್ರತಿಕೂಲ ಹೇಳಿಕೆಯನ್ನು ದಾಖಲಿಸಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ತನ್ನ ತಂದೆ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಮಗ ತನ್ನ ಹೇಳಿಕೆಯಲ್ಲಿ ತಿಳಿಸಿದ್ದನು. ಸೋಹನ್ ಲಾಲ್ ಚೌಹಾಣ್ ತನ್ನ ಪತ್ನಿಯ ರಹಸ್ಯ ಭಾಗಗಳಿಗೆ ಹಾಕಿದ್ದ ಬೀಗವನ್ನು ತೆಗೆದಿದ್ದ ವೈದ್ಯರು,( ಶಸ್ತ್ರಕ್ರಿಯೆ ನಡೆಸಿ ಬೀಗ ಜಡಿದಿದ್ದ) ಆತನಿಂದ ಬೀಗವನ್ನು ವಶಪಡಿಸಿಕೊಂಡಿದ್ದ ಪೊಲೀಸ್ ಸಿಬಂದಿ ಮತ್ತು ಕೆಲ ಸ್ವತಂತ್ರ ಸಾಕ್ಷಿಗಳು, ಸೋಹನ್ ಲಾಲ್ ಚೌಹಾಣ್ನ ವಿಕೃತ ಕೃತ್ಯದ ಬಗೆಗೆ ಸ್ಪಷ್ಟ ಹೇಳಿಕೆಗಳನ್ನು ನೀಡಿದ್ದರಿಂದಾಗಿ ಆರೋಪಿಯ ಮೇಲಣ ಆರೋಪ ಸಾಬೀತಾಯಿತು ಎಂದು ಪ್ರಕರಣದ ಸರಕಾರಿ ಅಭಿಯೋಜಕರಾಗಿದ್ದ ಜ್ಯೋತಿ ತೋಮರ್ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ